ಚಿತ್ರದುರ್ಗ : ಗಾಳಿ, ನೀರಿನ ನಂತರ ಮನುಷ್ಯನಿಗೆ ಅತ್ಯವಶ್ಯವಾದ ಮೂರನೆಯ ಜೀವನಧಾರವೇ ಆಹಾರ. ನಮ್ಮ ದಿನನಿತ್ಯದ ಆಹಾರದಲ್ಲಿ ಮೂರು ಬಿಳಿ ಪದಾರ್ಥಗಳಾದ ಮೈದಾ, ಉಪ್ಪು ಮತ್ತು ಸಕ್ಕರೆ ಮಿತಗೊಳಿಸಬೇಕು. ನಾವು ಸೇವಿಸುವ ನಿತ್ಯದ ಆಹಾರ ಔಷಧಿಯಂತೆ ದೇಹಕ್ಕೆ ಅನುಕೂಲಕರವಾಗಿರಬೇಕು ಎಂದು ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಸಹಾಯಕಿ ಪ್ರಾಧ್ಯಾಪಕಿ ಡಾ.ಡಿ.ಶಶಿಕಲಾ ಬಾಯಿ ಸಲಹೆ ನೀಡಿದರು.
ಹಿರಿಯೂರು ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ತೋಟಗಾರಿಕೆ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಹಾಲಿನ ಮೌಲ್ಯವರ್ಧನೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು.
ನಾವೇನು ಊಟ ಮಾಡುತ್ತಿದ್ದೇವೆ. ಯಾವ ಬಗೆಯ ಆಹಾರ ಸ್ವೀಕರಿಸುತ್ತಿದ್ದೇವೆ. ಯಾಕೆ ಊಟ ಮಾಡುತ್ತಿದ್ದೇವೆ ಎಂಬುದನ್ನು ಮುಖ್ಯವಾಗಿ ಅರಿಯಬೇಕು. ಪ್ರಸ್ತುತ ಸಮತೋಲಿತ ಆಹಾರದ ಕಡೆಗೆ ನಿರ್ಲಕ್ಷ ವಹಿಸುತಿದ್ದೇವೆ. ಶರೀರದ ಜೀವಕೋಶಗಳಲ್ಲಿ ಸರಿಯಾದ ಕಾರ್ಯನಿರ್ವಹಣೆಗೆ ಇರಬೇಕಾದ ಅಂಶಗಳ ಅನುಪಾತ ಏರುಪೇರಾಗಿ ಹೆಚ್ಚು ಶಕ್ತಿಯ ವ್ಯಯವಾಗಿ ನಾವು ಕಾಯಿಲೆಗೆ ಎಡೆ ಮಾಡಿಕೊಡುತ್ತೇವೆ ಎಂದರು.
ಪನ್ನೀರ್ ಮತ್ತು ವೇ.ಪನೀರ್ ತಯಾರಿಕೆ ಮತ್ತು ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟ ಡಾ.ಡಿ.ಶಶಿಕಲಾ ಬಾಯಿ, ಒಡೆದು ಹೋದ ಹಾಲಿನಿಂದ ಮಾಡುವ ಪದಾರ್ಥ ಪನ್ನೀರ್ ಹಾಗೂ ವೇ ಪನ್ನೀರ್. ಇದರಲ್ಲಿ ವಿಟಮಿನ್, ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ. ಇದರಿಂದ ಸ್ತನ ಕ್ಯಾನ್ಸರ್ ಸೇರಿದಂತೆ ಪನೀರ್ ನಾನ ಕಾಯಿಲೆಗಳಿಗೆ ರಾಮಬಾಣವಾಗಿದೆ. ಪನ್ನೀರ್‍ನಲ್ಲಿ ಔಷಧೀಯ ಗುಣಗಳಿರುವುದರಿಂದ ಪ್ರಸ್ತುತ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಜಂಕ್ ಫುಡ್, ಅತಿ ಬೇಯಿಸಿದ ಆಹಾರ, ಸಿದ್ಧ ಆಹಾರಗಳಲ್ಲಿ ಹೆಚ್ಚು ಹೆಚ್ಚು ಉಪ್ಪಿನಂಶ ಇರುವುದರಿಂದ ಇವು ಅಪಾಯಕಾರಿ. ಇಂದು ಅಪೌಷ್ಟಿಕತೆ ನಿವಾರಣೆ ಪ್ರಯತ್ನದಲ್ಲಿ ದಾಪುಗಾಲು ಹಾಕುತ್ತಿದ್ದರೂ ವಿಟಮಿನ್ ಕೊರತೆ, ಖನಿಜಾಂಶಗಳ ಕೊರತೆ, ಬೊಜ್ಜು ಸಮಸ್ಯೆ ಸೇರಿದಂತೆ ಹಲವು ರೋಗಗಳಿಂದ ಬಳಲುವಂತಾಗಿದೆ. ಇವೆಲ್ಲ ಸಮಸ್ಯೆಗಳಿಗೂ ಬಹುಶಃ ಅಗ್ಗದ, ಹೆಚ್ಚು ಸಂಸ್ಕರಿಸಿದ ಕಾರಣ. ಇವು ನಾಲಿಗೆಯ ರುಚಿ ತಣಿಸುವುದಷ್ಟಕ್ಕೆ ಸೀಮಿತವಾಗಿವೆ ಎಂದು ಡಾ.ಡಿ.ಶಶಿಕಲಾ ಬಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡಾ.ಬರ್ಮಪ್ಪ ಹಾಗೂ ಕಸವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವಮೂರ್ತಿ, ಅಂಗನವಾಡಿ ಶಿಕ್ಷಕಿ ಶಿಲ್ಪ ಮತ್ತು ಪುಷ್ಪ ಹಾಗೂ ಗ್ರಾಮದ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಇದ್ದರು. ಅಂತಿಮ ವರ್ಷದ ತೋಟಗಾರಿಕೆ ವಿದ್ಯಾರ್ಥಿಗಳಾದ ಗೌತಮ್ , ಸುದೀಪ್, ಪವನ್, ರಾಕೇಶ್, ಕಾವೇರಿ,ಅಂಜುಮ್, ಬಿಂದುಶ್ರೀ, ರಕ್ಷಿತಾ, ಚೈತ್ರ, ಅಂಬಿಕ, ಅಪರ್ಣ, ಶ್ರೇಯ, ನವೀನ್, ಜನಾರ್ದನ್ ಕಾರ್ಯಕ್ರಮ ನಡೆಸಿಕೊಟ್ಟರು.