ಗೃಹಲಕ್ಷಿö್ಮ ಯೋಜನೆಯಿಂದ ಸಾಮಾಜಿಕ ಮತ್ತ ಆರ್ಥಿಕ ಮುನ್ನಡೆ : ಸಿ.ಎಸ್.ಚಂದ್ರಭೂಪಾಲ
ಶಿವಮೊಗ್ಗ ಜ.07 : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ಬರುತ್ತಿರುವ ಎರಡು ಸಾವಿರ ರೂಪಾಯಿ 16 ನೇ ಕಂತಿನ ಹಣ ಜನವರಿ 14 ರಿಂದ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಗೃಹಲಕ್ಷ್ಮಿಯ ಯೋಜನೆಯ ಡಿಸೆಂಬರ್ ಮಾಹೆಯ ಕಂತಿನ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಹಣವನ್ನು ಆರ್ಥಿಕ ಇಲಾಖೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಜನವರಿ 14ನೇ ತಾರೀಖಿನಿಂದ ಹಣ ಜಮಾ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಳಾರ್ ರವರು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಶಿವಮೊಗ್ಗ, ಜಿಲ್ಲೆಯಲ್ಲಿ ಶೇಕಡ 90 ರಷ್ಟು ಮಹಿಳೆಯರು ಲಾಭ ಪಡೆದುಕೊಂಡಿದ್ದಾರೆ. ಈ ಯೋಜನೆಯಿಂದ ಪ್ರತಿ ಮಹಿಳಾ ಫಲಾನುಭವಿಗಳು ಈವರೆಗೆ 15 ಕಂತಿನಲ್ಲಿ ರೂ.30 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಬಹಳಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ವೃತ್ತಿಯನ್ನು ಆರಂಭಿಸಿದ್ದಾರೆ ಮತ್ತು ಉಪಯುಕ್ತ ವಸ್ತುಗಳನ್ನು ಖರೀದಿ ಮಾಡಿ ತಮ್ಮ ಜೀವನವನ್ನು ಹಸನಗೊಳಿಸಿಕೊಂಡಿದ್ದಾರೆ.
ಗೃಹಲಕ್ಷ್ಮಿಯ ಹಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ದಾರಿದೀಪವಾಗಿದೆ ಹಾಗೂ ಮಹಿಳೆಯರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಯ ಬದಲಾವಣೆಗಳನ್ನು ತರುವುದರಲ್ಲಿ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ.