ಹಿರಿಯೂರು ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಪ್ರಾತ್ಯಕ್ಷಿಕೆ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ವೀಕ್ಷಣೆ ಅನಿಲ ಸೋರಿಕೆ ತಡೆ: ಅಣಕು ಕಾರ್ಯಾಚರಣೆ
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜೆ.ಹಳ್ಳಿ ಹೋಬಳಿ ದಿಂಡಾವರ ಪಂಚಾಯಿತಿ ವ್ಯಾಪ್ತಿಯ ಮಾದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಪ್ರಾತ್ಯಕ್ಷಿಕೆ ಕಾರ್ಯಚರಣೆ ನಡೆಸಲಾಯಿತು.
ಅನಿಲ ಸೋರಿಕೆ ತಡೆಗಟ್ಟುವಿಕೆ ತುರ್ತು ಅಣಕು ಕಾರ್ಯಾಚರಣೆಯನ್ನು ಹಾಸನ-ಚೆರ್ಲಪಲ್ಲಿ ಎಲ್‍ಪಿಜಿ ಪೈಪ್‍ಲೈನ್‍ನ ಹೆಚ್‍ಸಿಪಿಎಲ್ ಚೈನೇಜ್ 123ರಲ್ಲಿ ಆಫ್‍ಸೈಟ್-ಅಣುಕು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು.
ಅನಿಲ ಸೋರಿಕೆ ಪ್ರಾತ್ಯಕ್ಷಿಕೆ: ಅಣಕು ಪ್ರದರ್ಶನದಡಿ ಹಾಸನ-ಚೆರ್ಲಪಲ್ಲಿ ಎಲ್‍ಪಿಜಿ ಪೈಪ್‍ಲೈನ್‍ನ ಹೆಚ್‍ಸಿಪಿಎಲ್ ಚೈನೇಜ್ 123ರ ಮಾದೇನಹಳ್ಳಿ ಗ್ರಾಮದಲ್ಲಿ ಅನಿಲ ಸೋರಿಕೆಯಾದ ಮಾಹಿತಿ ಭದ್ರತಾ ಸಿಬ್ಬಂದಿಯಿಂದ ನಿಯಂತ್ರಣ ಕೊಠಡಿ ಅಧಿಕಾರಿಗೆ ವಾಕಿಟಾಕಿ ಮೂಲಕ ಪರಸ್ಪರ ಸಂವಹನ ನಡೆಯುತ್ತದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಅನಿಲ ಸೋರಿಕೆಯಾದ ಸ್ಥಳದ ಸುತ್ತಮುತ್ತ ತುರ್ತು ಪರಿಸ್ಥಿತಿ ಘೋಷಿಸುತ್ತಾರೆ. ತಕ್ಷಣವೇ ಅನಿಲ ಸೋರಿಕೆ ಸಿಬ್ಬಂದಿ, ಅಂಬುಲೆನ್ಸ್ ಹಾಗೂ ವೈದ್ಯಕೀಯ ತಂಡವೂ ಬರುತ್ತದೆ. ನಂತರ ಸಿಬ್ಬಂದಿ ಅನಿಲ ಸೋರಿಕೆಯಾದ ಸ್ಥಳ ಪರಿಶೀಲಿಸಿ ಅಸ್ವಸ್ಥಗೊಂಡ ಭದ್ರತಾ ಸಿಬ್ಬಂದಿಯನ್ನು ವೈದ್ಯಕೀಯ ತಂಡದವರು ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ. ಹೀಗೆ ಭದ್ರತೆ, ರಕ್ಷಣೆ, ಅಗ್ನಿಶಾಮಕದಳದ ಸಿಬ್ಬಂದಿಯ ಕಾರ್ಯಾಚರಣೆ ಹಂತ ಹಂತವಾಗಿ ನಡೆಯುತ್ತದೆ. ಅಂತಿಮವಾಗಿ ಎಲ್‍ಪಿಜಿ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳಿಗೆ ದೃಢಪಡಿಸಲಾಯಿತು. ನಂತರ ಸೈರನ್ ಮೊಳಗಿಸಿ, ಹಸಿರು ಬಾವುಟ ಹಾರಿಸಲಾಯಿತು.
ಚಿತ್ರದುರ್ಗ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹಾಸನದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಹಯೋಗದೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಲವರ್ಧನೆ ಸಂಬಂಧ ಆಯೋಜಿಸಲಾಗಿದ್ದ ಅಣಕು ಪ್ರದರ್ಶನ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅನಿಲ ಸೋರಿಕೆ ಸಂದರ್ಭದಲ್ಲಿನ ಬಿಕ್ಕಟ್ಟು ಪರಿಸ್ಥಿತಿಯನ್ನು, ಸಂಭವಿಸುವ ಅನಾಹುತವನ್ನು ಯಾವ ರೀತಿಯಾಗಿ ನಿಭಾಯಿಸುವುದು ಹಾಗೂ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂಬುದನ್ನು ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.
ಅನಿಲ ಸೋರಿಕೆಯ ದುರಂತದಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಇಂತಹ ವಿಪತ್ತು ಸಂಭವಿಸಿದಾಗ ಯಾವ ರೀತಿ ಇದನ್ನು ತಡೆಗಟ್ಟಬಹುದು ಎಂಬುವುದರ ಕುರಿತು ಎಲ್ಲರಿಗೂ ಅರಿವು ಹಾಗೂ ಎಚ್ಚರಿಕೆ ಇರಬೇಕು ಎಂಬ ಕಾರಣದಿಂದ ಅನಿಲ ಸೋರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಪೈಪ್‍ಲೈನ್ ಹಾದುಹೋಗಿರುವ ಎಲ್ಲ ಗ್ರಾಮಗಳಲ್ಲಿಯೂ ಸಹ ನಿರಂತರವಾಗಿ ಅನಿಲ ಸೋರಿಕೆ ಅಣಕು ಪ್ರದರ್ಶನ ಹಮ್ಮಿಕೊಳ್ಳುವುದರಿಂದ ಅರಿವು ಮೂಡಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪೆಟ್ರೋಲಿಯಂ ಉತ್ಪನ್ನಗಳ ಪೈಪ್‍ಲೈನ್, ವಾಟರ್ ಪೈಪ್‍ಲೈನ್ ಸೇರಿದಂತೆ ಯಾವುದೇ ಪೈಪ್‍ಲೈನ್‍ಗಳನ್ನು ನಿರ್ವಹಣೆ ಮಾಡಲು ಅಗ್ನಿಶಾಮಕ ವಾಹನ ಸಂಚಾರ, ಅಂಬುಲೆನ್ಸ್, ಭದ್ರತಾ ತಂಡಗಳ ಸಂಚಾರಕ್ಕೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಈ ಪೈಪ್‍ಲೈನ್‍ಗೆ ಎಲ್ಲಿಯೂ ಆ ತರಹದ ರಸ್ತೆ ಇಲ್ಲ. ತುರ್ತು ಅವಘಡಗಳು ಸಂಭವಿಸಿದಾಗ ತಕ್ಷಣ ಆ ಸ್ಥಳಕ್ಕೆ ತಲುಪಲು ಸಮೀಪದ ರಸ್ತೆ ಅವಲಂಬಿಸಬೇಕಾಗುತ್ತದೆ. ಆ ರಸ್ತೆಯ ಮೂಲಕ ಆಗಮಿಸಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಆದರೆ ಈ ಪೈಪ್‍ಲೈನ್‍ಗೆ ಜಿಯೋ ಪೆನ್ಸಿಂಗ್ ಇದ್ದು, ಇದರ ಮೂಲಕ ಯಾವ ಸ್ಥಳದಲ್ಲಿ ಪೈಪ್‍ಲೈನ್ ಡ್ಯಾಮೇಜ್ ಆಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ರಸ್ತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಲ್‍ಪಿಜಿ ಪೈಪ್‍ಲೈನ್ ಹಾದು ಹೋಗಿರುವ ಎಲ್ಲ ಗ್ರಾಮಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಅನಿಲ ಸೋರಿಕೆ ತಡೆ ಸುರಕ್ಷತಾ ಅಭಿಯಾನಯನ್ನು ನಿರಂತರವಾಗಿ ಮಾಡಬೇಕು. ರೈತರು, ಸಾರ್ವಜನಿಕರು, ಮಕ್ಕಳು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪೈಪ್‍ಲೈನ್ ಹಾದುಹೋಗಿರುವ ಮಾಹಿತಿ ತಿಳಿದಿರಬೇಕು. ಒಂದು ವೇಳೆ ಅನಿಲ ಸೋರಿಕೆಯಾದರೆ ಯಾವ ರೀತಿಯ ಅನಾಹುತ ಸಂಭವಿಸುತ್ತದೆ. ಅನಾಹುತ ಉಂಟಾದಾಗ ಯಾರಿಗೆ ಸಂಪರ್ಕಿಸಬೇಕು ಎಂಬ ಮಾಹಿತಿ ಅತ್ಯಗತ್ಯ. ಹಾಗಾಗಿ ದುರ್ಘಟನೆ ತಡೆಯಲು ಹಾಗೂ ತಕ್ಷಣ ಮಾಹಿತಿ ತಿಳಿಸಲು ಸಹಾಯವಾಣಿ ಸಂಖ್ಯೆಯ ಮಾಹಿತಿ ಎಲ್ಲರೂ ತಿಳಿದಿರಬೇಕು ಎಂದು ಹೇಳಿದರು.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ ಚೀಪ್ ಸ್ಟೇಷನ್ ಮ್ಯಾನೇಜರ್ ಅಭಿಷೇಕ್ ಮಾತನಾಡಿ, ಮಂಗಳೂರು-ಹಾಸನ-ಮೈಸೂರು-ಬೆಂಗಳೂರು-ಚೆರ್ಲಪಲ್ಲಿ ಎಲ್‍ಪಿಜಿ ಪೈಪ್‍ಲೈನ್ ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ ಕಂಪನಿಯವರು ನಿರ್ವಹಿಸಿ ನಿರ್ವಹಿಸುತ್ತಿರುವ ಮಹತ್ವಪೂರ್ಣ ರಾಷ್ಟ್ರೀಯ ಯೋಜನೆ. ಈ ಪೈಪ್‍ಲೈನ್ ಮಂಗಳೂರಿನಿಂದ ಎಲ್‍ಪಿಜಿಯನ್ನು ರವಾನೆ ಮಾಡುತ್ತಾ ಹಾಸನದ ಮೂಲಕ ಯಡಿಯೂರು ಹಾಗೂ ಮೈಸೂರು, ಚೆರ್ಲಪಲ್ಲಿಯಲ್ಲಿ ಅಂತ್ಯಗೊಳ್ಳುತ್ತದೆ. ಈ ಪೈಪ್‍ಲೈನ್ ಉದ್ದೇಶವು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಬೆಳೆಯುತ್ತಿರುವ ಎಲ್‍ಪಿಜಿ ಬೇಡಿಕೆ ಪೂರೈಸುವುದಲ್ಲದೇ ಪಶ್ಚಿಮ ಘಟ್ಟ ಮತ್ತು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರ ವ್ಯವಸ್ಥೆಯನ್ನೂ ಸುಗಮಗೊಳಿಸುತ್ತದೆ ಎಂದರು.
ಪೈಪ್‍ಲೈನ್‍ಗಳು ಅತ್ಯಂತ ನುರಿತ ಮತ್ತು ಅನುಭವಿ ಸಂಸ್ಥೆಗಳಿಂದ ನಿರ್ಮಿಸಿದ್ದು, ಅತ್ಯಂತ ಸುರಕ್ಷಾ ಮತ್ತು ಪರಿಸರಸ್ನೇಹಿ ಸಾಗಾಣಿಕಾ ಮಾರ್ಗವಾಗಿದೆ. ಆದರೆ ಕೆಲವು ಬಾರಿ ಸಮಾಜ ವಿರೋಧಿಗಳು ಪೈಪ್‍ಲೈಬ್‍ನಿಂದ ಎಲ್‍ಪಿಜಿಯನ್ನು ಕಳವು, ಹಾನಿ, ಯಾವುದೇ ವಿಧ್ವಂಸಕ ಕೃತ್ಯ ಎಸಗಲು ಪ್ರಯತ್ನಿಸಿದಾಗ ಇಂತಹ ಸಮಾಜಘಾತಕ ಪ್ರಯತ್ನಗಳಿಂದ ರಾಷ್ಟ್ರೀಯ, ಸಾರ್ವಜನಿಕ ಆಸ್ತಿಗಳು ತೊಂದರೆಗೆ ಸಿಲುಕುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಎಲ್‍ಪಿಜಿ ಪೈಪ್‍ಲೈನ್ ಹಾದು ಹೋಗುವ ಎಲ್ಲಾ ಗ್ರಾಮಗಳಲ್ಲಿಯೂ ಸುರಕ್ಷತಾ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿನೊಂದಿಗೆ ಕೈಜೋಡಿಸುತ್ತಾ ಜನರಿಗೆ ಪೈಪ್‍ಲೈನ್‍ನ ಸುರಕ್ಷತೆ ಮತ್ತು ಭದ್ರತೆಯ ಅರಿವು ಮೂಡಿಸುವುದು ಈ ಸುರಕ್ಷಾ ಅಭಿಯಾನದ ಉದ್ದೇಶ ಎಂದು ಹೇಳಿದರು.
ಮಂಗಳೂರು-ಹಾಸನ-ಮೈಸೂರು-ಬೆಂಗಳೂರು-ಚೆರ್ಲಪಲ್ಲಿ ಅನಿಲ ಸೋರಿಕೆ ಉಂಟಾದ ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 18001801276 ಹಾಗೂ ಮಂಗಳೂರು ನಿಯಂತ್ರಣ ಕೊಠಡಿ ಮೊಬೈಲ್ ನಂ 8861986057 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಪೌರಾಯುಕ್ತ ವಾಸೀಂ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ವಿ ಅಗಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಪೊಲೀಸ್ ಇನ್ಸ್‍ಪೆಕ್ಟರ್ ಕಾಳಿಕೃಷ್ಣ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಹೆಚ್.ಎನ್.ಸಮರ್ಥ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ ಚೀಪ್ ಸ್ಟೇಷನ್ ಮ್ಯಾನೇಜರ್ ಅಭಿಷೇಕ್, ಭದ್ರತಾ ಅಧಿಕಾರಿ ಟಿ.ಎಂ.ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.