ಹಾವೇರಿ : ಹಾಸ್ಟೆಲ್ ನಲ್ಲಿ ಉಪವಾಸ ಕುಳಿತ ವಿದ್ಯಾರ್ಥಿಗಳು ಏನನ್ನೂ ತಿನ್ನದೆ ಕಳಪೆ ಗುಣಮಟ್ಟದ ಆಹಾರ ವಿತರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ತಾಲೂಕಿನ ದೇವಗಿರಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ಇಲಿ ಸಗಣಿ, ಅಕ್ಕಿ, ನೊರೆ, ಹುಳು ಬಾಧೆಯಿಂದ ಕೂಡಿದ ತರಕಾರಿ, ಕೊಳೆತ ಬಾಳೆಹಣ್ಣು, ದುರ್ವಾಸನೆ ಬೀರುವ ಮೊಟ್ಟೆ ವಿತರಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಕಂಡು ವಿದ್ಯಾರ್ಥಿಗಳು ಹಾಸ್ಟೆಲ್‌ನ ಹಿಂಭಾಗದಲ್ಲಿ ಹಾಳಾದ ಆಹಾರವನ್ನು ಎಸೆದಿದ್ದಾರೆ.
ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿ ಗ್ರಂಥಾಲಯವನ್ನು ಸಂಗ್ರಹ ಕೊಠಡಿಯಾಗಿ ಪರಿವರ್ತಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಅವ್ಯವಸ್ಥೆಯನ್ನು ತಕ್ಷಣವೇ ನಿಭಾಯಿಸಬೇಕು, ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಮತ್ತು ವಿದ್ಯಾರ್ಥಿಗಳಿಗೆ ಕಲಿಯಲು ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕು. ಅಲ್ಲಿಯವರೆಗೆ ಊಟ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಅಲ್ಲೇ ಕುಳಿತು ಪಟ್ಟು ಹಿಡಿದರು.