ಪೂರ್ವಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಸ್ಥಳದಲ್ಲಿಯೇ ಪ್ರಕರಣ ಇತ್ಯರ್ಥಪಡಿಸಲು ಸಿದ್ಧರಾಗ
ಚಿತ್ರದುರ್ಗ : ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಇದೇ ಜ.22 ರಿಂದ 24 ರವರಗೆ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದು, ತಮ್ಮ ಇಲಾಖೆಯ ಪ್ರಕರಣಗಳು ವಿಚಾರಣೆ ನಡೆದ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸ್ಥಳಲ್ಲಿಯೇ ಪ್ರಕರಣ ವಿಲೇವಾರಿಗೆ ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಉಪ ಲೋಕಾಯುಕ್ತರು ಜ.22 ರಿಂದ 24 ರವರೆಗೆ ಜಿಲ್ಲೆಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ನಡೆಸಲು ಆಗಮಿಸುತ್ತಿದ್ದು, ಈ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪೂರ್ವಸಿದ್ದತೆ ಕುರಿತು ಜಿಲ್ಲಾಮಟ್ಟ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತರ ವಿಚಾರಣೆ ನಡೆಸುವರು. ಸಂಬಂದಪಟ್ಟ ಇಲಾಖೆ ಮುಖ್ಯಸ್ಥರು ದೂರುದಾರಿಗೆ ಈ ಕುರಿತು ಮಾಹಿತಿ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವೊಂದು ದೂರುಗಳು ವೈಯಕ್ತಿಕ ಹೆಸರಿನೊಂದಿಗೆ ದಾಖಲಾಗಿವೆ. ಆದರೆ ಅಂತಹ ಅಧಿಕಾರಿಗಳು ಸದ್ಯ ಬೇರೆಡೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ ಹಾಗೂ ಸ್ಥಿತಿಗತಿಯನ್ನು ವಿಚಾರಣೆ ವೇಳೆ ನಿಖರವಾದ ಉತ್ತರವನ್ನು ಉಪಲೋಕಾಯುಕ್ತರಿಗೆ ತಿಳಿಸಬೇಕು ಎಂದರು.
ಕಚೇರಿ ಹಂತದಲ್ಲಿಯೇ ದೂರುಗಳ ಇತ್ಯರ್ಥಪಡಿಸಿ: ಇಲಾಖಾ ಕಚೇರಿಗಳಿಗೆ ಬರುವ ದೂರುಗಳನ್ನು ಕಚೇರಿ ಹಂತದಲ್ಲಿಯೇ ಇತ್ಯರ್ಥಪಡಿಸಲು ಕ್ರಮವಹಿಸಬೇಕು. ಕಚೇರಿಗೆ ಬರುವ ದೂರುಗಳು ವಿಲೇವಾರಿ ಆಗಿವೆಯೇ ಎಂಬುದನ್ನು ಇಲಾಖೆ ಮುಖ್ಯಸ್ಥರು ಪರಿಶೀಲಿಸಬೇಕು. ಅಗತ್ಯ ದಾಖಲೆಗಳು ಬೇಕಾಗಿದ್ದರೆ ಅರ್ಜಿದಾರರಿಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ನಿಗಧಿತ ಸಮಯಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದರೆ ಮಾತ್ರ ಹಿಂಬರಹ ನೀಡಿ, ಸೂಕ್ತ ತಿಳುವಳಿಕೆ ನೀಡಬೇಕು. ಅಸಮರ್ಪಕ ಮಾಹಿತಿ ನೀಡಿ ಪ್ರಕರಣ ಇತ್ಯರ್ಥ ಪಡಿಸಬೇಡಿ ಎಂದರು.
ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಅಬಕಾರಿ, ಬೆಸ್ಕಾಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಗ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ತಮ್ಮ ಇಲಾಖೆಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಸಕ್ತ ಹಂತದ ಮಾಹಿತಿ ತಮ್ಮ ಬಳಿ ಲಭ್ಯವಿರಬೇಕು ಎಂದು ತಿಳಿಸಿದ ಅವರು, ವಿವಿಧ ಇಲಾಖೆಗಳಿಗೆ ಉಪಲೋಕಾಯುಕ್ತರು ದಿಡೀರ್ ಭೇಟಿ ನೀಡಲಿದ್ದು, ಅಧಿಕಾರಿಗಳು ತಮ್ಮ ಕಚೇರಿ ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು, ಪ್ರತಿಯೊಬ್ಬ ಅಧಿಕಾರಿಗಳು, ನೌಕರರು ವೈಯಕ್ತಿಕ ಕ್ಯಾಶ್ ರಿಜಿಸ್ಟರ್ ನಿರ್ವಹಣೆ, ಚಲನ-ವಲನ ರಿಜಿಸ್ಟರ್, ಫೈಲ್ ಮೂಮೆಂಟ್ ರಿಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಟಪಾಲು ಶಾಖೆಗೆ ಬರುವ ದೂರುಗಳನ್ನು ನಿಗಧಿತ ಸಮಯದಲ್ಲಿಯೇ ವಿಲೇವಾರಿ ಆಗಬೇಕು ಎಂದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ 73 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಈಗಾಗಲೇ 2 ಪ್ರಕರಣಗಳು ಇತ್ಯರ್ಥಗೊಂಡಿದ್ದು, 71 ಪ್ರಕರಣಗಳು ಇವೆ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಅಧಿಕಾರಿಗಳು ಕಚೇರಿಗೆ ನಿಗಧಿತ ಸಮಯದಲ್ಲಿ ಹಾಜರಿರಬೇಕು. ಕಚೇರಿಗೆ ಸಲ್ಲಿಕೆಯಾಗುವ ದೂರುಗಳು ಹಾಗೂ ಅಹವಾಲುಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಉಪ ಲೋಕಾಯುಕ್ತರು ಜ. 21 ರಂದು ಸಂಜೆ ಬೆಂಗಳೂರಿನಿಂದ ಹೊರಟು, ರಾತ್ರಿ 8 ಗಂಟೆಗೆ ಚಿತ್ರದುರ್ಗ ನಗರಕ್ಕೆ ಆಗಮಿಸಿ, ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು. ಜ.22 ರಂದು ಬೆಳಿಗ್ಗೆ 10 ರಿಂದ 1.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ 05 ರವರೆಗೆ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 5.30 ಗಂಟೆಗೆ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತಂತೆ ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆಗಳು, ಆರ್‍ಟಿಒ, ಸಬ್‍ರಿಜಿಸ್ಟರ್, ಸಮಾಜ ಕಲ್ಯಾಣ ಹಾಗೂ ನ್ಯಾಯಾಂಗ ಮುಂತಾದ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿರುವ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜ.23 ರಂದು ಬೆ. 9.45 ಗಂಟೆಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ಚಿತ್ರದುರ್ಗ ಬಾರ್ ಅಸೋಸಿಯೇಶನ್ ಸದಸ್ಯರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಗುಡ್ ಗೌರ್ನೆನ್ಸ್ ಕುರಿತು ಸಂವಾದ ನಡೆಸುವರು. ಬೆಳಿಗ್ಗೆ 11 ರಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆ. 11.30 ರಿಂದ 1.30 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಈಗಾಗಲೆ ದಾಖಲಾಗಿರುವ (ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ) ಪ್ರಕರಣಗಳ ಕುರಿತು ತನಿಖೆ, ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸುವರು.
ಜ. 24 ರಂದು ಬೆ. 09 ರಿಂದ 10 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ. 10.15 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ನಂತರ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡುವರು ಎಂದು ತಿಳಿಸಿದರು.
ಸಭೆಯಲ್ಲಿ ಚಿತ್ರದುರ್ಗ ಉಪವಿಭಾಗದ ಡಿವೈಎಸ್‍ಪಿ ದಿನಕರ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಆನಂದ್, ಗಣಿ ಇಲಾಖೆ ಉಪನಿರ್ದೇಶಕ ಮಹೇಶ್, ಡಿಹೆಚ್‍ಒ ಡಾ.ಜಿ.ಪಿ.ರೇಣುಪ್ರಸಾದ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.