ಚಿತ್ರದುರ್ಗ : ಮನುಷ್ಯನ ಬಾಯಿಯ ಆರೋಗ್ಯಕ್ಕೂ ಹಾಗೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ಹಾಗಾಗಿ ವ್ಯಕ್ತಿಗಳು ತಮ್ಮ ಬಾಯಿ ಆರೋಗ್ಯದ ಬಗ್ಗೆ ಜವಾಬ್ದಾರಿ ಹಾಗೂ ಕಾಳಜಿ ವಹಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಬಾಯಿ ಆರೋಗ್ಯ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಬಾಯಿಯ ಆರೋಗ್ಯ ದಿನವು ಉತ್ತಮ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮೌಖಿಕ ನೈರ್ಮಲ್ಯದ ಪ್ರಾಮುಖ್ಯತೆಯ ಅರಿವು ಮೂಡಿಸುವತ್ತ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಥೀಮ್, “ನಿಮ್ಮ ಬಾಯಿಯ ಬಗ್ಗೆ ಹೆಮ್ಮೆಯಿಂದಿರಿ”, ವ್ಯಕ್ತಿಗಳು ತಮ್ಮ ಮೌಖಿಕ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ಉತ್ತಮ ಮೌಖಿಕ ನೈರ್ಮಲ್ಯ ಅಭ್ಯಾಸಗಳು ಅವರ ಜೀವನದ ಮೇಲೆ ಬೀರಬಹುದಾದ ಧನಾತ್ಮಕ ಪರಿಣಾಮವನ್ನು ಆಚರಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಎಲ್ಲಾ ವ್ಯಕ್ತಿಗಳಿಗೂ ಹಲ್ಲಿನ ಆರೋಗ್ಯ ಜಾಗೃತಿಗೆ ಉತ್ತೇಜಿಸುವ ಗುರಿ ಹೊಂದಲಾಗಿದ್ದು, ನಿಮ್ಮ ಮೌಖಿಕ ನೈರ್ಮಲ್ಯದ ಬಗ್ಗೆ ಹೆಮ್ಮೆಪಡಿ ಎಂದು ಹೇಳಿದರು.
40 ವರ್ಷ ಮೇಲ್ಪಟ್ಟವರಿಗೆ ದಂತ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ದಂತಪಕ್ತಿ ಅಳವಡಿಸುವ ಕಾರ್ಯಕ್ರಮ ಜಾರಿಯಲ್ಲಿದೆ. ಅಲ್ಲದೆ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಂತ ತಜ್ಞರ ನೇಮಕಾತಿ ಮತ್ತು ದಂತ ಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳು ಔಷಧಗಳು ದೊರೆಯುತ್ತಿದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ನಸಿರ್ಂಗ್ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.