ಚಿತ್ರದುರ್ಗ : ಪದವಿ ಮತ್ತು ಡಿಪ್ಲೋಮ ಮುಗಿಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯು ಆಸರೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ 180 ದಿನ ಪೂರೈಸಿರುವ ಪದವಿ ಮತ್ತು ಡಿಪ್ಲೋಮ ವೃತ್ತಿಪರ ತರಬೇತಿ ಪಡೆದ ನಿರುದ್ಯೋಗಿ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯುವನಿಧಿ ಯೋಜನೆಯು ಜಾರಿಗೆ ಬಂದು 1 ವರ್ಷಗಳಾಗಿದ್ದು, ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ತುಂಬಾ ಪ್ರಯೋಜನವನ್ನು ನೀಡಿವೆ ಅದರಲ್ಲಿ ಶಕ್ತಿ ಯೋಜನೆಯು ಮಹಿಳೆಯರಿಗೆ ಬಹಳ ಅನುಕೂಲವಾಗಿದ್ದು, ಇದೇ ಜ.20 ರವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಇದ್ದು, ನಂತರವೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯುವನಿಧಿ ಯೋಜನೆಯು ನಿರುದ್ಯೋಗಿ ಪದವೀಧರರಿಗೆ 3000/- ಮತ್ತು ಡಿಪ್ಲೋಮ ದವರಿಗೆ 1500/- ರೂ.ಗಳನ್ನು ಒದಗಿಸುವ ಅಭೂರ್ತಪೂರ್ವ ಯೋಜನೆ ಇದಾಗಿದ್ದು, ಪ್ರತಿಯೊಬ್ಬ ನಿರುದ್ಯೋಗಿಗಳಿಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತಾಲಯ ಸಹಾಯಕ ನಿರ್ದೇಶಕಿ ತನುಜಾ ಎಸ್ ರಾಂಪುರೆ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಜ.20ರವರೆಗೆ ರಾಜ್ಯಾದ್ಯಾದಂತ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಒನ್, ಕರ್ನಾಟಕ ಒನ್, ಕಾಲೇಜು, ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್-2024ರ ಅಂತ್ಯಕ್ಕೆ 4717 ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದು, 6,76,50.000 ರೂ.ಗಳನ್ನು ಪಾವತಿ ಮಾಡಲಾಗಿದೆ. ಎಂದು ತಿಳಿಸಿದರು. ಯುವನಿಧಿ ಪ್ಲಸ್ ಅಡಿಯಲ್ಲಿ ನಾಲ್ಕು ಕೌಶಲ್ಯ ತರಬೇತಿಗಳನ್ನು ಆರಂಭಿಸಿಲಾಗಿದ್ದು, ಕರ್ನಾಟಕ ಕೌಶಲ್ಯ ಪೋರ್ಟಲ್‍ನಲ್ಲಿ ವಿದ್ಯಾರ್ಥಿಗಳ ಡಾಟಾ ನಮೂದಿಸಲಾಗಿದೆ. 4 ವಾರದಿಂದ 4 ತಿಂಗಳವರೆಗೆ ತರಬೇತಿಯನ್ನು ಸರ್ಕಾರವು ನೀಡುತ್ತಿದೆ. ತರಬೇತಿ ಮುಗಿದ ನಂತರ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಪಡೆದುಕೊಂಡು ಹೆಚ್ಚು ಹೆಚ್ಚು ಕೌಶಲ್ಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಡಿ.ಎನ್ ಮೈಲಾರಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಆರ್.ಪ್ರಕಾಶ್, ಸಮಿತಿಯ ಸದ್ಯಸರಾದ ಅಬ್ದುಲ್ಲಾ ಶಾ ವಲಿ, ಉದ್ಯೋಗಾಧಿಕಾರಿ ರವೀಂದ್ರ ಡಿ, ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿಗಳು, ಹಾಗೂ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಯುವನಿಧಿ ಯೋಜನೆ ಸಂಯೋಜಕರು, ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಎಸ್.ಪಾಂಡುರಂಗಪ್ಪ ಸ್ವಾಗತಿಸಿದರು, ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಮುರುಳಿಧರ ವಂದಿಸಿದರು.