ಚಿತ್ರದುರ್ಗ : ಮಹಾಯೋಗಿ ವೇಮನರು ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸರಿ ದಾರಿಗೆ ಯತ್ನಿಸಿದವರು. ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮಹಾಯೋಗಿ ವೇಮನ ಜಯಂತಿ ಆಚರಣೆ ಸಮಾರಂಭದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಜಯಂತಿ ಆಚರಣೆಗಳು ಜಾತಿಯ ಒಗ್ಗಟ್ಟು, ಜಾತಿಯ ಬಲ ಪ್ರದರ್ಶನವಲ್ಲ. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಮಹನೀಯರ ಸಂದೇಶ, ಬದುಕು, ವಿಚಾರಧಾರೆಗಳು ಇಡೀ ಮಾನವ ಸಂಕುಲಕ್ಕೆ ಸಂಬಂಧಪಟ್ಟಿವೆ. ವೇಮನ ವಿಚಾರ ತಿಳಿದುಕೊಳ್ಳುವ ಮೂಲಕ ನಾವು ಮೌಲ್ಯಯುತ ಬದುಕು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ರೆಡ್ಡಿ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಉತ್ತಮ ಸಮಾಜವಾಗಿದೆ. ಮಹನೀಯರ ಜಯಂತಿ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಹನೀಯರ, ಮಾನವಾತಾವಾದಿಗಳ ವಿಚಾರಧಾರೆಗಳನ್ನು ತಿಳಿಸಬೇಕು ಎಂದು ತಿಳಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಸಂಸ್ಕøತಿ, ಸಂಸ್ಕಾರ ಅಳವಿನಂಚಿನಲ್ಲಿವೆ. ಹಾಗಾಗಿ ಕುಸಿಯುತ್ತಿರುವ ಮೌಲ್ಯಗಳನ್ನು ಕಟ್ಟಬೇಕು. ಆ ಮೂಲಕ ಸಮಾಜವನ್ನು ಉತ್ತಮವಾಗಿ ಮಾರ್ಗಕ್ಕೆ ಕೊಂಡ್ಯೊಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ ಮಾತನಾಡಿ, ವೇಮನರು ತೆಲುಗಿನಲ್ಲಿ ಬರೆದ ಅನೇಕ ವಚನಗಳು ಬೇರೆ ಬೇರೆ ಭಾಷೆಗಳಲ್ಲದೇ ಕನ್ನಡಕ್ಕೂ ಭಾಷಾಂತರಗೊಂಡಿವೆ. ಮಹಾಯೋಗಿ ವೇಮನರ ವಚನಗಳು ಸಮಾಜಕ್ಕೆ ಮಾರ್ಗದರ್ಶನವಾಗಿದ್ದು, ಅವರ ವಚನಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಚಳ್ಳಕೆರೆ ತಾಲ್ಲೂಕು ಬೇಡರೆಡ್ಡಿಹಳ್ಳಿ ಜಿ.ವಿ.ಆಂಜನಪ್ಪ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಬಿ.ಭೀಮರೆಡ್ಡಿ ಉಪನ್ಯಾಸ ನೀಡಿ, ವೇಮನರು ಹೇಳಿದ ವಚನಗಳಲ್ಲಿ ನಮ್ಮ ಜೀವನಕ್ಕೆ ಅನ್ವಯಿಸುವ, ಜೀವನ ಉತ್ತಮವಾಗಿ ಸಾಗುವುದಕ್ಕೆ, ಬೇಕಾಗುವ ಜ್ಞಾನ ಪಡೆಯುವುದಕ್ಕಾಗಿ ವೇಮನ ವಚನಗಳನ್ನು ಓದಿ ಅರ್ಥೈಸಿಕೊಂಡು ಬದುಕಿದರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
ವೇಮನರು ಕೇವಲ ರೆಡ್ಡಿ ಸಮುದಾಯಕ್ಕೆ ಮಾತ್ರ ಸೀಮಿತ ಎಂಬ ಸಂಕುಚಿತ ಮನೋಭಾವದಿಂದ ಹೊರಬರಬೇಕು. ವೇಮನರು ಜಗತ್ತು ಕಂಡ ದಾರ್ಶನಿಕರು. ವೇಮನರನ್ನು ವಿಶಾಲ ದೃಷ್ಠಿಕೋನದಿಂದ ಗಮನಿಸಿ, ಅರ್ಥೈಸಿಕೊಂಡರೆ ವೇಮನರು ಸಂಪೂರ್ಣವಾಗಿ ಅರ್ಥವಾಗುತ್ತಾರೆ ಎಂದು ತಿಳಿಸಿದ ಅವರು, ವೇಮನರ ವಚನಗಳನ್ನು ನಾವು ತಿಳಿದುಕೊಂಡು ನಮ್ಮ ಮುಂದಿನ ಪೀಳಿಗೆಗೆ ಈ ಎಲ್ಲ ವಿಷಯಗಳನ್ನು ವರ್ಗಾಯಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ರೆಡ್ಡಿ ಸಮುದಾಯದ ನಿವೃತ್ತ ಅಧಿಕಾರಿಗಳಾದ ವಿಶ್ವನಾಥ ರೆಡ್ಡಿ, ಇಂಟೂರು ಜಯರಾಮರೆಡ್ಡಿ, ರಾಮಕೃಷ್ಣರೆಡ್ಡಿ, ಹನುಮಂತರೆಡ್ಡಿ, ವೆಂಕಟೇಶ್ ರೆಡ್ಡಿ, ಮುಖಂಡರಾದ ವಿಜಯಕಮಾರ್ ಡಿ.ಕೆ.ಹಟ್ಟಿ, ಮಂಜುನಾಥ ಬೆಳಗಟ್ಟ, ವಕೀಲ ಬಾಬುರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು. ಹಿಮಂತರಾಜ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.