ಡೆಂಗ್ಯೂ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ; ಸೊಳ್ಳೆ ನಿಯಂತ್ರಣ ಹೊರತು ಡೆಂಗ್ಯೂ ಜ್ವರ ನಿಯಂತ್ರಣ ಕಷ್ಟ ಸಾಧ್
ಚಿತ್ರದುರ್ಗ : ಸೊಳ್ಳೆಗಳ ನಿಯಂತ್ರಣದ ಹೊರತು ಡೆಂಗ್ಯೂ ಜ್ವರ ನಿಯಂತ್ರಿಸುವುದು ಕಷ್ಟ ಸಾಧ್ಯ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ಹೇಳಿದರು.
ನಗರದ ಚೇಳುಗುಡ್ಡ ಸಮೀಪದ ಮದೀನಾ ಮುನಾವರ ಮಸೀದಿ ಮುಂಭಾಗದ ರಸ್ತೆಗಳಲ್ಲಿ ಮಂಗಳವಾರ ಡೆಂಗ್ಯೂ ಜ್ವರದ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಜಾಗೃತಿ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರವು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ ಮತ್ತು ನಾಲ್ಕು ಸಂಬಂಧಿತ ಡೆಂಗ್ಯೂ ವೈರಸ್‍ಗಳಿಂದ ಉಂಟಾಗುತ್ತದೆ. ಈ ರೋಗವನ್ನು “ಮುರಿದ-ಮೂಳೆ” ಜ್ವರ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇದು ಕೆಲವೊಮ್ಮೆ ತೀವ್ರವಾದ ಕೀಲು ಮತ್ತು ಸ್ನಾಯು ನೋವನ್ನು ಉಂಟುಮಾಡುತ್ತದೆ ಮತ್ತು ಮೂಳೆಗಳು ಮುರಿಯುತ್ತಿರುವಂತೆ ಭಾಸವಾಗುತ್ತದೆ ಎಂದು ಹೇಳಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ವಾರಕ್ಕೊಮ್ಮೆಯಾದರೂ ನಿಮ್ಮ ಮನೆಯ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ನೀರನ್ನು ಸಂಗ್ರಹಿಸಿ ಮುಚ್ಚಳವನ್ನು ಮುಚ್ಚಿಯಿಡಿ ಡ್ರೈ ಡೇ ಆಚರಿಸಿ ಅಲ್ಲದೆ ಈ ದಿನ ಇಲಾಖೆಯು ನಿಮ್ಮ ಮನೆಯ ತೊಟ್ಟಿಗಳಿಗೆ ಲಾರ್ವಾಹಾರಿ ಮೀನುಗಳನ್ನು ವಿತರಿಸಲಾಗುತ್ತಿದೆ. ಇವುಗಳನ್ನು ಊಟಕ್ಕೆ ಉಪಯೋಗಿಸಲು ಬರುವುದಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ; ಕೀಟ ಚಿಕ್ಕದು ಬಾದೆ ದೊಡ್ಡದು ಎಂಬ ನಾಣ್ಣುಡಿ ಅಂತೆ ಸಾರ್ವಜನಿಕರು ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಪಡೆಯಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜಿಲ್ಲಾ ಮಲೇರಿಯಾ ವಿಭಾಗದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್ ಮಳಲಿ, ನಾಗರಾಜ್, ನೆಹರು ನಗರ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುಮೂರ್ತಿ, ಗೋಪಾಲಕೃಷ್ಣ, ಕೀಟ ಸಂಗ್ರಹಕಾರರಾದ ಶ್ರೀಕಾಂತ್, ಕಾವ್ಯ , ಆಶಾ ಕಾರ್ಯಕರ್ತೆಯರಾದ ಅಭಿನಯ, ಗೀತಾ, ಸಾರ್ವಜನಿಕರು ಭಾಗವಹಿಸಿದ್ದರು.