ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಿ
ಚಿತ್ರದುರ್ಗ : ದೇಶದ ಅಭಿವೃದ್ಧಿಗೆ ಉತ್ತಮ ನಾಯಕರು ಅಗತ್ಯ. ಮತದಾರರನ್ನು ಆಯ್ಕೆ ಮಾಡಲು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಭಾರತ ಚುನಾವಣಾ ಆಯೋಗ ಹಾಗೂ ಆರೋಗ್ಯ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಯುವಕರು ಹಾಗೂ ವಿದ್ಯಾರ್ಥಿಗಳು ನಿಮ್ಮ ಮನೆಗಳಲ್ಲಿ ಮತದಾನದ ಮಹತ್ವವನ್ನು ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೇಪಿಸಬೇಕು. 18 ವರ್ಷ ತುಂಬಿದ ಯುವಕರು ಆನ್ಲೈನ್ ಮೂಲಕ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಹಾಕಬಹುದು. ಮುದ್ರಿತ ಗುರುತಿನ ಚೀಟಿ ನಿಮ್ಮ ಮನೆಬಾಗಿಲಿಗೆ ಬರುತ್ತದೆ. ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಭಾರತ ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಚುನಾವಣೆಗಳನ್ನು ಕಾಲಕಾಲಕ್ಕೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗಕ್ಕೆ ಇದೆ. 18 ವರ್ಷ ತುಂಬಿದ ಎಲ್ಲ ನಾಗರಿಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪ್ರಾಪ್ತವಾಗುತ್ತದೆ. ಚುನಾವಣೆ ಆಯೋಗ ಎಲ್ಲ ಅರ್ಹ ಮತದಾರ ಪಟ್ಟಿಯನ್ನು ತಯಾರಿಸುವ ಹಾಗೂ ಕಾಲಕಾಲಕ್ಕೆ ಪರಿಷ್ಕರಿಸುವ ಕೆಲಸ ಮಾಡುತ್ತದೆ. ಮರಣ ಹೊಂದಿದವರು, ದೇಶದ ಪೌರತ್ವ ತ್ಯಜಿಸಿ, ವಿದೇಶಗಳಿಗೆ ಹೋದವರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಚುನಾವಣಾ ಆಯೋಗ ತೆಗೆದುಹಾಕುತ್ತದೆ. 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸುವುದು ಅತ್ಯಂತ ದೊಡ್ಡ ಕೆಲಸವಾಗಿದೆ. ಇವರಿಗೆ ಹೊಸದಾಗಿ ಗುರುತಿನ ಚೀಟಿ. ಇದರಿಂದ ಯುವಕರಿಗೆ ಮತದಾನ ಮಾಡುವ ಪವಿತ್ರ ಹಕ್ಕು ಲಭ್ಯವಾಗುತ್ತದೆ ಎಂದು ಹೇಳಿದರು.
ರಸ್ತೆ ಸರಿಯಲ್ಲ, ಮೂಲಭೂತ ಸೌಕರ್ಯಗಳು ಇಲ್ಲ, ಜನಪ್ರತಿನಿಧಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ನಾವೆಲ್ಲರೂ ದೂರುತ್ತೇವೆ. ಆದರೆ ಈ ಪ್ರಶ್ನೆಗಳನ್ನು ಕೇಳುವ ನೈತಿಕತೆ ನಮಗಿದೆಯೇ ಎಂದು ಪ್ರಶ್ನಿಸಿದಾಗ ಉತ್ತರ ಸಿಗುವುದಿಲ್ಲ. ದೇಶದ ದೇಶದ ಚುನಾವಣೆಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಇದುವರೆಗೂ ಶೇ.100ರಷ್ಟು ಮತದಾನ ಚಲಾವಣೆಯಾದದ್ದು ಕಂಡಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಮತದಾನ ಜಾಗೃತಿ ಕಡಿಮೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, 1950 ಜನವರಿ 25 ರಂದು ಭಾರತ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. ಈ ನೆನಪಿಗಾಗಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಸಧೃಡವಾಗಿರಲು ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕ ಎಂದು ತಿಳಿಸಿ, ಉತ್ತಮ ಪ್ರಜಾಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಭಾಗವಹಿಸೋಣ ಎಂದು ಪ್ರಕಟಿಸಿದರು.
ಜ.01ಕ್ಕೆ 18 ವರ್ಷ ಪೂರೈಸಿದವರೆಲ್ಲರೂ ಸಹ ಮತದಾರ ಪಟ್ಟಿಗೆ ಸೇರ್ಪಡೆಗೆ ಅರ್ಹತೆ ಪಡೆಯುತ್ತಾರೆ. ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸದೃಢ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಹಬ್ಬ ಚುನಾವಣೆಯಲ್ಲಿ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ : ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಹಾನಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಅಧಿಕಾರಿ ಎ.ಎಸ್.ಜಾನಕಿರಾಮ್, ಚಳ್ಳಕೆರೆ ಕ್ಷೇತ್ರದ ಜನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಗಟ್ಟೆ ಅಧಿಕಾರಿ ಆರ್.ಹನುಮಂತಪ್ಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಎಸ್.ಲೀಲಾ ಹಾಗೂ ನೆಹರು ನಗರದ ಮಿಲ್ಲತ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಅಧಿಕಾರಿ ಕತುನ್, ಹಿರಿಯೂರು ಕ್ಷೇತ್ರದ ಅಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಎಸ್.ಸುರೇಶ್ ಕುಮಾರ್, ಹೊಸದುರ್ಗ ಕ್ಷೇತ್ರದ ಜನರಲ್ ಕಾರಿಯಪ್ಪ ಸ್ಮಾರಕ ಶಾಲೆಯ ಮತಗಟ್ಟೆ ಅಧಿಕಾರಿ ಅಶ್ವತ್ಥಾಮ, ಹೊಳಲ್ಕೆರೆ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಕೆ.ವಿವೇಕಾನಂದ ಅವರನ್ನು ಸನ್ಮಾನಿಸಲಾಯಿತು.
ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಅವರು ಮತದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಯಿತು.
ಮತದಾರ ಜಾಗೃತಿ ಜಾಥಾಕ್ಕೆ ಚಾಲನೆ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಒನಕೆ ಓಬವ್ವ ವೃತ್ತದಲ್ಲಿ ಮತ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಮಹತ್ವದ ಕುರಿತು ನಾಗರಿಕರಿಗೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಶೇ. 2 ರಿಂದ 3% ರಷ್ಟು ಮತದಾನವಾಗಿದೆ. ಮತದಾನ ಮಾಡುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಅರ್ಹರೆಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತದ ಮೂಲಕ ನಗರದ ತರಾಸು ರಂಗಮಂದಿರದವರೆಗೂ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತ ಎಂ. ರೇಣುಕಾ, ಚುನಾವಣಾ ತಹಶೀಲ್ದಾರ್ ಮಲ್ಲಿಕಾರ್ಜುನ್ ನಾಯಕ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು.