ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಸ್ಥಳೀಯ ಸಂಸ್ಥೆಗಳು ಬಾಕಿ ತೆರಿಗೆ ಸಂಗ್ರಹಿಸಿ: ಸಚಿವ ರಹೀಂ ಖಾನ್
ಬಳ್ಳಾರಿ,ಜ.26 : ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳು ವಿವಿಧ ಬಾಕಿ ತೆರಿಗೆ ಹಣ ಸಂಗ್ರಹಿಸಿ ಶೇಕಡವಾರು ಪ್ರಗತಿ ಸಾಧಿಸಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ವಿವಿಧ ಆಸ್ತಿ, ನೀರಿನ ಶುಲ್ಕ ಮತ್ತು ಅಂಗಡಿ ಶುಲ್ಕ, ಟ್ರೇಡ್ ಲೈಸೆನ್ಸ್ ಗಳ ತೆರಿಗೆ ಹಣವನ್ನು ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ವಸೂಲಿ ಮಾಡಿ ಗುರಿ ಸಾಧಿಸಬೇಕು. ಹೆಚ್ಚು ಬಾಕಿ ಇರುವಲ್ಲಿ ಪೌರಾಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವಸೂಲಿ ಮಾಡುವಂತೆ ಸಚಿವರು ತಿಳಿಸಿದರು.
*ತೆರಿಗೆ ಹಣ ಸಂಗ್ರಹಿಸಿ:*
ಆಸ್ತಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಕುರೇಕುಪ್ಪ ಪುರಸಭೆಯು 2024-25 ನೇ ಸಾಲಿನಲ್ಲಿ ಕೇವಲ ಶೇ.13.26 ರಷ್ಟು ಪ್ರಗತಿ ಸಾಧಿಸಿದ್ದು, ತೆರಿಗೆ ಹಣವನ್ನು ಆದ್ಯತೆ ಮೇಲೆ ವಸೂಲಿ ಮಾಡಬೇಕು ಎಂದರು.
ಮಾಲೀಕರು ಮನೆಗಳ ನಿರ್ಮಾಣ ಸಂದರ್ಭದಲ್ಲಿ ಇರುವ ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳಿಗೆ ಕಟ್ಟಿರುತ್ತಾರೆ. ನಂತರ ಅವುಗಳನ್ನು ವಿಸ್ತರಣೆ ಮಾಡಿ, ಮೊದಲನೆ, ಎರಡನೇ ಮಹಡಿ ವಿಸ್ತೀರ್ಣ ಹೆಚ್ಚಿಸಿದರೂ ಸಹ ಹಳೆಯ ಕಟ್ಟಡದ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆಯಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು ಎಂದರು.
*ಕುಡಿಯುವ ನೀರಿಗೆ ಆದ್ಯತೆ:*
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಗ್ರಾಪಂ ವ್ಯಾಪ್ತಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಬೇಕು. ನೀರು ಸರಬರಾಜು ಪೈಪ್ ಲೈನ್ ಗಳಲ್ಲಿ ಚರಂಡಿ ನೀರು ಸೇರಿದಂತೆ ಯಾವುದೇ ಕಲುಷಿತ ನೀರು ಸೇರದಂತೆ ಜಾಗ್ರತೆ ವಹಿಸಬೇಕು. ಈ ಕುರಿತು ಮುಖ್ಯಮಂತ್ರಿಗಳು ಆಯಾ ಡಿಸಿ, ಜಿಪಂ ಸಿಇಒ ಅವರ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಓವರ್ ಹೆಡ್ ಟ್ಯಾಂಕ್ ಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಬಳಿಕ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಕುಡಿಯಲು ಯೋಗ್ಯವಾಗಿದೆ ಎಂದು ಖಚಿಸಿಪಡಿಸಿಕೊಂಡ ನಂತರವೇ ಪೂರೈಕೆ ಮಾಡಬೇಕು. ಕುಡಿಯುವ ನೀರಿನ ಬಗ್ಗೆ ಯಾವುದೇ ಕಾರಣಕ್ಕೂ ಉದಾಸೀನತೆ ತೋರಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯ ಅವಲಂಬಿತವಾಗಿದ್ದು, ಕಾಲುವೆಗಳ ಮುಖಾಂತರ ನೀರು ಶುದ್ದೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಕುರೇಕುಪ್ಪ ಭಾಗದಲ್ಲಿ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಕೆಎಂಇಆರ್‌ಸಿ ಅನುದಾನದಡಿ ಕುಡಿಯುವ ನೀರಿನ ಐಆರ್ ಘಟಕ ಸ್ಥಾಪನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
*ಇಂದಿರಾ ಕ್ಯಾಂಟಿನ್‌ಗಳ ನಿರ್ವಹಣೆ:*
ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಕಾರ ನಿಗದಿಪಡಿಸಿರುವ ಗುಣಮಟ್ಟದಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕ್ಯಾಂಟೀನ್‌ಗಳಿಗೂ ಸಿ.ಸಿ.ಟಿ.ವಿ ಅಳವಡಿಸಬೇಕು. ಆಯಾ ಸ್ಥಳೀಯ ಆಹಾರ ಪದ್ಧತಿ ಅನುಗುಣವಾಗಿ ಆಹಾರದ ಮೆನು ಸಿದ್ಧಪಡಿಸಿ ವಿತರಣೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ನಗರೋತ್ಥಾನ ಹಂತ-4 ಯೋಜನೆಯ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಬೇಕು. ಜಿಲ್ಲೆಯ ಎಲ್ಲಾ ನಗರ ಮತ್ತು ಪಟ್ಟಣಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳು ಅನುಮೋದನೆಯಾದ ಫಲಾನುಭವಿಗಳಿಗೆ ಶೀಘ್ರವಾಗಿ ಮನೆಗಳನ್ನು ಪ್ರಾರಂಭಿಸಿ ಜೊತೆಗೆ ನಿಯಮಿತವಾಗಿ ಜಿಪಿಎಸ್ ಜಿಯೋಟ್ಯಾಗಗಳನ್ನು ಮಾಡಿ ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯು ಅಗತ್ಯವಾಗಿದ್ದು, ಸಂಬAಧಿಸಿದ ಅಧಿಕಾರಿಗಳು ನಿರ್ವಹಣೆ ಕುರಿತು ಭೇಟಿ ನಡೆಸಬೇಕು. ಸರಿಯಾಗಿ ನಿರ್ವಹಣೆ ಕೈಗೊಳ್ಳದಿದ್ದರೆ, ಕೂಡಲೇ ಅವರ ಮೇಲೆ ಕ್ರಮ ಜರುಗಿಸಬೇಕು ಎಂದರು.
ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, 24*7 ಕುಡಿಯುವ ನೀರು ಸರಬರಾಜು, ಯುಜಿಡಿ ಸೇರಿದಂತೆ ವಿವಿಧ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ವರದಿಗಳ ಕುರಿತು ಮಾಹಿತಿ ಪಡೆದ ಸಚಿವರು ಹಲವು ಸಲಹೆ-ಸೂಚನೆ ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಸಚಿವರ ಆಪ್ತ ಕಾರ್ಯದರ್ಶಿ ಮುರಳಿಧರ್, ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕ ವಿಜಯ್ ಕುಮಾರ್, ಅಧೀಕ್ಷಕ ಅಭಿಯಂತರರಾದ ಬಸವರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಘವೇಂದ್ರ, ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀಕಂಠ ಸ್ವಾಮಿ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಂಜಿನಿಯರ್ ಗಳು ಹಾಗೂ ಇತರರು ಉಪಸ್ಥಿತರಿದ್ದರು.