76ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಶಯ ಮೇಟಿಕುರ್ಕಿ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ: ದುಡಿಯುವ ಕೈಗಳಿಗೆ ಕೆಲಸವೂ ಗ್ಯಾರಂಟಿ
ಚಿತ್ರದುರ್ಗ : ಹಿರಿಯೂರು ತಾಲ್ಲೂಕು ಮೇಟಿಕುರ್ಕಿ ಗ್ರಾಮದ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದ್ದು, ಇದರಿಂದ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಲಿದ್ದು, ದುಡಿಯುವ ಕೈಗಳಿಗೆ ಕೆಲಸವೂ ಸಹ ಗ್ಯಾರಂಟಿಯಾಗುತ್ತದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಶಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಪಕ್ಕದ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದರು.
ದಾವಣಗೆರೆ-ತುಮಕೂರು ನಡುವಿನ ನೇರ ರೈಲು ಮಾರ್ಗದ ನಿರ್ಮಾಣಕ್ಕೆ 1000 ಎಕರೆಗೂ ಹೆಚ್ಚು ಜಮೀನನ್ನು ಸ್ವಾಧೀನಪಡಿಸಿಕೊಂಡು, ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ರೈಲ್ವೆ ಅಭಿವೃದ್ಧಿ ಕಾಮಗಾರಿ ಚಾಲನೆಯಲ್ಲಿದೆ ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನ ಮಟ್ಟ ಸುಧಾರಿಸಿವೆ. ಬಡವರು ಸಮಾನತೆಯಿಂದ ತಲೆ ಎತ್ತಿ ಬದುಕುವ ಅವಕಾಶ ಕಲ್ಪಿಸಿವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಅರ್ಹ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ರೂ.170/- ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ರೂ.20.96 ಕೋಟಿ ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 3,95,471 ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರೂ.2000/-ವರ್ಗಾವಣೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರತಿದಿನ ಸರಾಸರಿ 65 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದಕ್ಕಾಗಿ ನಿಗಮಕ್ಕೆ ರೂ.138 ಕೋಟಿ ಪಾವತಿಸಲಾಗಿರುತ್ತದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪದವೀಧರರು ಮತ್ತು ಡಿಪ್ಲೊಮೊ ಪಾಸಾದವರಿಗೆ ಒಟ್ಟು ರೂ.7.86 ಕೋಟಿ ಸಂದಾಯ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 3,78,084 ಫಲಾನುಭವಿಗಳು ನೊಂದಣಿಯಾಗಿದ್ದು, ರೂ.234 ಕೋಟಿ ಸರ್ಕಾರದಿಂದ ಭರಿಸಲಾಗಿರುತ್ತದೆ ಎಂದು ಹೇಳಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ವಾಣಿ ವಿಲಾಸಸಾಗರ ಜಲಾಶಯದಿಂದ ಮುಳುಗಡೆಯಾಗುವ ಜಮೀನು ಪ್ರದೇಶಗಳನ್ನು ತಡೆಯುವ ಸಲುವಾಗಿ ರೂ.124 ಕೋಟಿಗಳ ಅನುದಾನ, ಜಲಾಶಯದ ಕಾಲುವೆಗಳ ಆಧುನೀಕರಣಕ್ಕಾಗಿ ರೂ.1274 ಕೋಟಿಗಳ ವೆಚ್ಚದಲ್ಲಿ ಯೋಜನೆಯನ್ನು ಸಹ ಸಿದ್ದಪಡಿಸಲಾಗುತ್ತದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಗ್ರಾಮೀಣ ಭಾಗದ ಜನರ ಕುಡಿಯುವ ನೀರಿಗಾಗಿ ಮನೆ ಮನೆಗೆ ನೀರಿನ ಸಂಪರ್ಕ ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಹಂತಗಳಲ್ಲಿ ಸುಮಾರು 392.79 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಚಾಲನೆಯಲ್ಲಿರುತ್ತವೆ. ಚಿತ್ರದುರ್ಗ ಜಿಲ್ಲೆಯು ಅಭಿವೃದ್ಧಿಯ ಹಾದಿಯಲ್ಲಿಯೂ ಸಹ ಮುಂದಿದೆ ಎಂದು ಹೇಳಿದರು.
1947ರಲ್ಲಿ ಸ್ವಾತಂತ್ರ್ಯ ದೊರಕಿತು. ಆದರೆ ದೇಶವನ್ನು ಮುನ್ನೆಡೆಸುವ ನೀತಿ ನಿಯಮಗಳನ್ನು, ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಸಂವಿಧಾನವೊಂದು ಬೇಕಿತ್ತು. ಅದಕ್ಕಾಗಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರವರು ಡಾ.ಅಂಬೇಡ್ಕರ್‍ರವರ ಅಧ್ಯಕ್ಷತೆಯಲ್ಲಿ 7 ಜನ ಸದಸ್ಯರ ಸಮಿತಿಯನ್ನು ನೇಮಕ ಮಾಡಿತು. ಅದರಲ್ಲಿ ನಮ್ಮ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪನವರು ಇದ್ದರೆಂಬುದು ಹೆಮ್ಮೆಯ ವಿಷಯ ಎಂದರು.
ಸಂವಿಧಾನ ರಾಷ್ಟ್ರ ಮುನ್ನಡೆಸುವ ಕಾನೂನು ದೀವಿಗೆ ಅಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ಸಂಕಥನವೂ ಆಗಿದೆ. ವ್ಯಕ್ತಿಯೊಬ್ಬ ತನ್ನ ಅನನ್ಯತೆಯನ್ನು ಉಳಿಸಿಕೊಂಡು ಎಲ್ಲರೊಳಗೊಂದಾಗಿ ಬದುಕುವ ಅಪೂರ್ವ ಅವಕಾಶವಾಗಿದೆ. ಸಮಾಜದ ತಳವರ್ಗದ ಮನುಷ್ಯನಿಗೂ ಧ್ವನಿಯಾಗಿ ಸಮತೆ, ಮಮತೆ, ಮಾನವೀಯತೆ ಭ್ರಾತೃತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡಿರುವ ಇದು ಭಾರತೀಯರ ಪಾಲಿಗೆ ಒಂದು ಕಾವ್ಯವೂ, ಧರ್ಮವೂ, ಜೀವನ ವಿಧಾನವೂ, ಕರ್ತವ್ಯ ಪಥವೂ ಆಗಿ ವರ್ಗಾತೀತ, ಜಾತ್ಯತೀತ, ಧರ್ಮಾತೀತವಾಗಿ ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಕರ್ತವ್ಯಗಳನ್ನು ಬೋಧಿಸುತ್ತದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಚಳ್ಳಕೆರೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಿ.ನಾಗರಾಜ್, ಹಿರಿಯೂರು ಪೊಲೀಸ್ ಠಾಣೆ ಸಿ.ಪಿ.ಸಿ ಬಿ.ವೈ.ಸಿದ್ಧಲಿಂಗೇಶ್ವರ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮುದ್ದುರಾಜ್, ನಾಯಕನಹಟ್ಟಿ ಪೊಲೀಸ್ ನಿರೀಕ್ಷಕ ಶಿವಕುಮಾರ್, ಹೊಳಲ್ಕೆರೆ ಕರಗುಂಟೆ ಗ್ರಾಮ ಆಡಳಿತಾಧಿಕಾರಿ ತಿಪ್ಪೇಸ್ವಾಮಿ, ಮೊಳಕಾಲ್ಮೂರು ಮುರಡಿ ಗ್ರಾಮ ಆಡಳಿತಾಧಿಕಾರಿ ರತ್ನಮ್ಮ, ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಣ ಇಲಾಖೆಯ ಬಿ.ಐ.ಇ.ಅರ್.ಟಿ ರಾಜೀವ್, ಎ.ಪಿ.ಡಿ ಸರ್ಕಾರೇತರ ಸಂಸ್ಥೆಯ ನಂದಿನಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶ್ವ ಮಾನವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಹೆಚ್.ಆರ್.ಸುಧಾ, ಕ್ರೀಡೆಯಲ್ಲಿ ಸಾಧನೆ ಮಾಡಿದ ಅಥ್ಲಿಟ್ ನೌಮನ್ ಅಹಮ್ಮದ್ ಷರೀಫ್, ಪ್ಯಾರ ಅಥ್ಲಿಟ್ ಶ್ರೀಹರಿ, ಮೊಳಕಾಲ್ಮೂರು ಆಸ್ಪತ್ರೆ ಪ್ರಸೂತಿ ತಜ್ಞ ಡಾ.ಮಂಜುನಾಥ್ ಅವರಿಗೆ ಗಣರಾಜೋತ್ಸವ ಶುಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆಕರ್ಷಕ ಪಥ ಸಂಚಲನ: ಗಣರಾಜ್ಯೋತ್ಸವ ಅಂಗವಾಗಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಈ ಬಾರಿ ಪರೇಡ್ ಕಮಾಂಡರ್ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್‍ಪಿಐ ಎಸ್.ಎಸ್.ಯುವರಾಜ್ ಅವರ ಮುಂದಾಳತ್ವದಲ್ಲಿ ಒಟ್ಟು 25 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
ಆರ್‍ಎಸ್‍ಐ ವರಣ್ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆ ತುಕಡಿ, ಪಿಎಸ್‍ಐ ಸುರೇಶ್ ನೇತೃತ್ವದಲ್ಲಿ ನಾಗರೀಕ ಪೊಲೀಸ್ ತುಕಡಿ, ಪ್ರಹ್ಲಾದ್ ನೇತೃತ್ವದಲ್ಲಿ ಗೃಹ ರಕ್ಷಕ ದಳ, ವಸಂತ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ತುಕಡಿ, ಸರ್ಕಾರಿ ವಿಜ್ಞಾನ ಕಾಲೇಜು ಎನ್‍ಸಿಸಿ, ಸಂತ ಜೋಸೆಫೆರ ಕಾನ್ವೆಂಟ್ ಪ್ರೌಢಶಾಲೆಯ ಎನ್‍ಸಿಸಿ ಮತ್ತು ಗೈಡ್ಸ್ ತಂಡ, ವಿದ್ಯಾವಿಕಾಸ ಆಂಗ್ಲ ಪ್ರೌಢಶಾಲೆ, ವಿದ್ಯಾವಿಕಾಸ ಆಂಗ್ಲ ಪ್ರೌಢಶಾಲೆ, ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ದೇಸಾಯಿ ಬಾಲಕಿಯರು ಹಾಗೂ ಬಾಲಕರ ತಂಡ, ಪಾಶ್ರ್ವನಾಥ, ಎಸ್‍ಜೆಎಂ ಆಂಗ್ಲಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ಕ್ರೆಸೆಂಟ್ ಪ್ರೌಢಶಾಲೆ ಹಾಗೂ ತರಳುಬಾಳು ಪ್ರೌಢಶಾಲೆ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು. ಪಥ ಸಂಚಲನಕ್ಕೆ ಬ್ಯಾಂಡ್ ಮಾಸ್ಟರ್ ತಿಪ್ಪೇಶ್ ನಾಯ್ಕ್ ನೇತೃತ್ವದ ಪೊಲೀಸ್ ಬ್ಯಾಂಡ್ ಹಾಗೂ ಅಜಯ್ ನೇತೃತ್ವದ ಸಂತ ಜೋಸೆಫರ ಕಾನ್ವೆಂಟ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಡಾನ್ ಬಾಸ್ಕೋ ಪ್ರೌಢಶಾಲೆಯ ಚಂದನಾ ನಾರಾಯಣ್ ಮತ್ತು ಪಲ್ಲಕ್ ಸಮೀರ್, ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆಯ ಯಶ್ವಂತ್ ನೇತೃತ್ವದ ಬ್ಯಾಂಡ್ ವಾದ್ಯವೃಂದ ಸಾಥ್ ನೀಡಿತು.
ಮನಸೂರೆಗೊಂಡ ಸಾಂಸ್ಕøತಿಕ ಕಾರ್ಯಕ್ರಮಗಳು: ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸಿದರು.
ಚಿತ್ರದುರ್ಗ ನಗರದ ನ್ಯಾಷನಲ್ ಪ್ರೌಢಾಲೆ ಹಾಗೂ ಎಸ್‍ಆರ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು, ಡಾನ್‍ಬಾಸ್ಕೋ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಆಕರ್ಷಕ ನೃತ್ಯರೂಪಕ ನೋಡುಗರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಗೋವಿಂದ ಎಂ.ಕಾರಜೋಳ, ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.